ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ಮುಂದಿನ ವರ್ಷ ಮೇ – ಜೂನ್ ನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕೂರುವಂತಿಲ್ಲ. ಲೋಕಸಭೆ ಚುನಾವಣೆಯಲ್ಲೂ ಈ ಗೆಲುವಿನ ಯಾನ ಮುಂದುವರೆಯಬೇಕು ಎಂದು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಸಚಿವ ಸಂಪುಟ ಬಿಕ್ಕಟ್ಟಿನ ನಡುವೆಯೇ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಖಡಕ್ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಿತು.
ಸಭೆಯಲ್ಲಿ ಅಧಿಕಾರ ಹಂಚಿಕೆ ವಿಚಾರ, ಸಚಿವ ಸ್ಥಾನದ ವಿಚಾರ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡದಿರಿ. ಈ ರೀತಿಯ ಹೇಳಿಕೆಗಳು ಸರ್ಕಾರ ಹಾಗೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಲಾಯಿತು ಎಂದು ತಿಳಿದುಬಂದಿದೆ.
ಇದೇ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಬೇಕು ಎಂದು ಡಿಕೆ ಶಿವಕುಮಾರ್ ಶಾಸಕರಿಗೆ ಟಾಸ್ಕ್ ಕೊಟ್ಟಿದ್ದಾರೆ.