20 ಕೋಟಿ ಐಟಿ ಬೇಟೆ: ಹಣ ನೋಡಿ ದಂಗಾದ ಅಧಿಕಾರಿಗಳು

20 ಕೋಟಿ ಐಟಿ ಬೇಟೆ: ಹಣ ನೋಡಿ ದಂಗಾದ ಅಧಿಕಾರಿಗಳು

 

ಬೆಂಗಳೂರು :” ಚುನಾವಣಾ ಅಭ್ಯರ್ಥಿಗಳಿಗೆ ಫಂಡಿಂಗ್‌ ಮಾಡಲು ಹಣ ಸಂಗ್ರಹಿಸಿದ್ದ ಫೈನಾನ್ಶಿಯರ್‌ಗಳ ನಿವಾಸಗಳ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಂಗಳೂರು ಹಾಗೂ ಮೈಸೂರಿನಲ್ಲಿ ಈ ದಾಳಿ ನಡೆದಿದ್ದು, ಸುಮಾರು 20 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಸುಮಾರು 15 ಕೋಟಿ ರೂಪಾಯಿ ನಗದು ಹಾಗೂ ಐದು ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ನಿನ್ನೆ ಬೆಳಗ್ಗೆ ಏಕಾಕಾಲದಲ್ಲಿ ದಾಳಿ ನಡೆಸಲಾಗಿದ್ದು, ಎರಡು ದಿನಗಳ ಕಾಲ ನಿಂತರವಾಗಿ ಪರಿಶೀಲನೆಯನ್ನು ನಡೆಸಲಾಗಿದೆ. ಬೆಂಗಳೂರಿನ ಶಿವಾಜಿನಗರ, ಆರ್‌ವಿಎಂ ಬಡಾವಣೆ , ಸದಾಶಿವನಗರ, ಕುಮಾರ ಪಾರ್ಕ್‌ ವೆಸ್ಟ್, ಶಾಂತಿನಗರ, ಕಾಕ್ಸ್‌ಟೌನ್‌ನಲ್ಲಿರುವ ಮನೆಗಳ ಮೇಲೆ ಈ ದಾಳಿ ನಡೆದಿದೆ. ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಣವನ್ನು ಫಂಡಿಂಗ್‌ ಮಾಡಲು ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಹಣವನ್ನು ವಶಕ್ಕೆ ಪಡೆದಿರುವ ಐಟಿ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಶ ಪಡಿಸಿಕೊಂಡಿರುವ ಹಣವೆಲ್ಲವೂ 500 ರೂಪಾಯಿ ಮುಖಬೆಲೆಯ ನೋಟ್‌ಗಳಾಗಿವೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮೇ ೧೦ರಂದು ನಡೆಯಲಿದ್ದು, ಅಂತಿಮ ಹಂತದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ರಾಜಕೀಯ ಪಕ್ಷಗಳು ಜನರ ಬೆಂಬಲ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ಅಂತಿಮ ದಿನಗಳಂದು ಮತದಾರರಿಗೆ ಹಣದ ಆಮಿಷವೊಡ್ಡುವ ಸಲುವಾಗಿ ಹಣವನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಲಾಗಿದೆ ಎನ್ನಲಾಗುತ್ತಿದೆ.