This is the title of the web page
This is the title of the web page

ಬಿಜೆಪಿ ಪ್ರಣಾಳಿಕೆ ಬಿಡುಗಡೆ; ವರ್ಷಕ್ಕೆ ಮೂರು ಉಚಿತ ಸಿಲಿಂಡರ್, ನಂದಿನಿ ಹಾಲು ಉಚಿತ!

ಬಿಜೆಪಿ ಪ್ರಣಾಳಿಕೆ ಬಿಡುಗಡೆ; ವರ್ಷಕ್ಕೆ ಮೂರು ಉಚಿತ ಸಿಲಿಂಡರ್, ನಂದಿನಿ ಹಾಲು ಉಚಿತ!

 

ಬೆಂಗಳೂರು: ಚುನಾವಣೆ ಬೆನ್ನಲ್ಲೇ, ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ಮಾತನಾಡಿದ ಜೆಪಿ ನಡ್ಡಾ, ರಾಜ್ಯದ 224 ಕ್ಷೇತ್ರದ ಜನತೆ, ತಜ್ಞರ ಅಭಿಪ್ರಾಯ ಪಡೆದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಬಿಜೆಪಿಯದ್ದು ಜನಪರ ಪ್ರಣಾಳಿಕೆಯಾಗಿದೆ, ಜನರಿಗೆ ಏನೆಲ್ಲಾ ಒಳ್ಳೆಯದನ್ನು ಮಾಡಲು ಸಾಧ್ಯವಿದೆ, ಅದನ್ನು ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ವರ್ಷಕ್ಕೆ ಮೂರು ಉಚಿತ ಸಿಲಿಂಡರ್, ನಂದಿನಿ ಹಾಲು ಉಚಿತ!
ಈ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ ಮೂರು ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ಉಚಿತ ಹಾಲು, ತಿಂಗಳಿಗೆ 5 ಕೆಜಿ ಸಿರಿಧಾನ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಪ್ರತಿ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತಿಂಡಿ-ಊಟ ನೀಡುವುದಾಗಿ ತಿಳಿಸಿದೆ. ಸರ್ವರಿಗೂ ಸೂರು ಯೋಜನೆಯಡಿ ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿಕೊಡುವ ಭರವಸೆ ನೀಡಿದೆ.

ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ 10000 ರೂಪಾಯಿ ಫಿಕ್ಸೆಡ್ ಡಿಪಾಸಿಟ್ ಮಾಡುವುದಾಗಿ ತಿಳಿಸಿದೆ. ಹಿರಿಯ ನಾಗರೀಕರಿಗೆ ಪ್ರತಿ ವರ್ಷ ಉಚಿತ ವೈದ್ಯಕೀಯ ತಪಾಸಣೆಯನ್ನು ಒದಗಿಸುವುದಾಗಿ ಹೇಳಿದೆ.

ಬಿಜೆಪಿಯ ಪ್ರಮುಖ ಭರವಸೆಗಳು
ಮುಂದಿನ 5 ವರ್ಷಗಳಲ್ಲಿ 200 ಮೀನು ಕೃಷಿ ಉತ್ಪಾದನಾ ಕೇಂದ್ರಗಳು ಸೇರಿದಂತೆ 1,000 ಕೃಷಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಭರವಸೆ ನೀಡಿದೆ. ಭದ್ರಾ ಮೇಲ್ದಂಡೆ, ಕಳಸಾ ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದಾಗಿ ಬಿಜೆಪಿ ಹೇಳಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ಪ್ರೋತ್ಸಾಹಧನವನ್ನು 5 ರೂಪಾಯಿಗಳಿಂದ 7 ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಬಿಜೆಪಿ ಆಶ್ವಾಸನೆ ನೀಡಿದೆ. ಮೊಬೈಲ್ ಪಶು ಆರೋಗ್ಯ ಕ್ಲಿನಿಕ್ ಸ್ಥಾಪಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.

ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ದೇಶದ ಅತಿ ದೊಡ್ಡ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ವಿಧವೆಯರ ಮಾಸಿಕ ಪಿಂಚಣಿಯನ್ನು 800 ರುಪಾಯಿಗಳಿಂದ 200 ರುಪಾಯಿಗಳಿಗೆ ಹೆಚ್ಚಿಸುವುದಾಗಿ ಹೇಳಿದೆ. ತಿರುಪತಿ, ಅಯೋಧ್ಯೆ, ಕಾಶಿ, ರಾಮೇಶ್ವರ, ಕೊಲ್ಹಾಪುರ, ಶಬರಿಮಲೆ ಮತ್ತು ಕೇದಾರನಾಥದಂತಹ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳುವ ಬಡ ಕುಟುಂಬಗಳಿಗೆ 25 ಸಾವಿರ ನೀಡುವ ಭರವಸೆ ನೀಡಿದೆ.