ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗಮಿಸಿದ್ದು, ಕಾಡುಗೊಲ್ಲ ಸಮುದಾಯದ ಮಹಿಳೆಯರು ಆರತಿ ಬೆಳಗುವ ಮೂಲಕ ಹಿರಿಯೂರಿಗೆ ಬರಮಾಡಿಕೊಂಡರು. ಇವರಿಗೆ ವಿಷೇಶ ಉಡುಗೊರೆ ನೀಡುತ್ತಿದಂತೆ ಮತದಾರರು ಜೈ ಷೋಷ ಮೊಳಗಿಸಿದರು.
ಹಿರಿಯೂರು ತಾಲೂಕು ಕ್ರೀಡಾಂಗಣದಲ್ಲಿ ಕಾಡುಗೊಲ್ಲ ಸಮುದಾಯದ ಜೊತೆ ಸಂವಾದವನ್ನು ಆಯೋಜಿಸಿದ್ದು, ಸಂವಾದದಲ್ಲಿ ಕಾಡುಗೊಲ್ಲರ ಬೇಡಿಕೆ ಮತ್ತು ಅವರ ಸಮಸ್ಯೆಗಳನ್ನು ಆಲಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಮಸ್ಯೆಗಳು ಬಗೆ ಹರಿಯುವ ಬಗ್ಗೆ ಭರವಸೆ ನೀಡಿದರು.
ಸಂವಾದದಲ್ಲಿ ಮಾತನಾಡಿದ ಮಾಜಿ ಎಂಎಲ್ಸಿ ಜಯಮ್ಮ ಬಾಲರಾಜ್, ಕಾಡುಗೊಲ್ಲರನ್ನು ಎಸ್ಟಿ ಮೀಸಲಾತಿಗೆ ಸೇರಿಸ ಬೇಕೆಂದು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದನ್ನು ತಾವುಗಳು ಮಾಡಿ ಕೊಡುವ ಮೂಲಕ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲರನ್ನು ಅಭಿವೃದ್ಧಿಯತ್ತ ಕರೆದೊಯ್ಯಬೇಕು ಎಂದು ಮನವಿ ಮಾಡಿದರು.
ಕಾಡುಗೊಲ್ಲರು ಅರಣ್ಯಗಳಲ್ಲಿ ವಾಸವಿದ್ದು, ಶಿಕ್ಷಣದಿಂದ ಬಹಳ ಹಿಂದುಳಿದಿದ್ದೆವೆ, ರಾಜಕೀಯವಾಗಿಯೂ ಕೂಡ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಇನ್ನೂ ಆರ್ಥಿಕವಾಗಿ ಅಭಿವೃದ್ಧಿ ಯಾಗುವುದು ದೂರದ ಮಾತಾಗಿದೆ. ನಮಗೆ ಎಸ್ಟಿ ಸೌಲಭ್ಯ ನೀಡಿದಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದರು.