ಹುಬ್ಬಳ್ಳಿ: ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪೋಕೆ ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ.ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ ಎಲ್ ಸಂತೋಷ್ ಕಾರಣ ಎಂದು ನೇರ ಗಂಭೀರ ಆರೋಪ ಮಾಡಿದ್ದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್.
ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಅಂದಿದ್ದೆ, ಇಂದು ಅವರ ಹೆಸರನ್ನು ಬಹಿರಂಗಪಡಿಸುತ್ತಿದ್ದೇನೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಂದಾಗಿ ನನಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪಿ ಹೋಯಿತು, ಇವರ ಜೊತೆ ಹಲವು ಜನರು ಇರಬಹುದು ಎಂದು ಆರೋಪ ಮಾಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದು ಬಿ ಎಲ್ ಸಂತೋಷ್ ಮತ್ತು ರಾಜ್ಯ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ಘೋಷಣೆ ಆಗುವವರೆಗೆ ಸುಮ್ಮನಿದ್ದೆ ಎಂದಿದ್ದಾರೆ.
ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಾಗ ವರಿಷ್ಠರಿಗೆ ಕೇಳಿದ್ದೆ. ನಿಮಗೆ ಟಿಕೆಟ್ ಕೊಡಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೇಳಿದ್ದರು. ನೀವೇ ಚುನಾವಣೆಗೆ ಆಸಕ್ತಿಯಿಲ್ಲವೆಂದು ಹೇಳಿಬಿಡಿ ಎಂದು ಸಹ ಎಂದು ಹೇಳಿದ್ದರು. ಒಂದು ಪತ್ರ ಕಳುಹಿಸುತ್ತೇವೆ, ಸಹಿ ಮಾಡಿ ಕಳಿಸಿ ಎಂದಿದ್ದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮಾತು ಕೇಳಿ ಆಘಾತವಾಯ್ತು. ಸೌಹಾರ್ದಯುತವಾಗಿ ಕರೆದು ಮಾತಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಬಿಜೆಪಿಯವರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರ ತಂದಿದೆ ಎಂದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ. ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ. ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ 1 ವರ್ಷದಿಂದ ಷಡ್ಯಂತ್ರ ಮಾಡಿಕೊಂಡು ಬಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಂದ ಪ್ಯಾಚ್ ಅಪ್ ಮಾಡಲಾಗಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.
ಯಡಿಯೂರಪ್ಪ, ಅನಂತ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಈಗ ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪ್ರಮುಖ ಲಿಂಗಾಯತ ನಾಯಕ ನಾನೇ.ಹೀಗಿರುವಾಗ ನನ್ನನ್ನು ಬಿಜೆಪಿಯಲ್ಲಿ ಈ ಮಟ್ಟಕ್ಕೆ ಕಡೆಗಣಿಸಿದ್ದು ತೀರಾ ನೋವುಂಟು ಮಾಡಿದೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.