ಬೆಂಗಳೂರು,ಮಾ 31: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನ ಮಂತ್ರಿಗಳು, ಬಿಜೆಪಿ ರಾಷ್ಟ್ರೀಯ ನಾಯಕರು ದಂಡಯಾತ್ರೆ ಮಾಡುತ್ತಿದ್ದಾರೆ. ಈಗಾಗಲೇ ಪ್ರಧಾನಿಗಳು 7 ಬಾರಿ ರಾಜ್ಯಕ್ಕೆ ಬಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ಹೆಸರಲ್ಲಿ ರಾಜ್ಯ ಬಿಜೆಪಿ ನಾಯಕರು ಮೋದಿ ಟೂರ್ ಡೀಲ್ ನಡೆಸಿದ್ದಾರೆ. ಇದರಲ್ಲಿ 40 % ಅಲ್ಲ 300 % ಲೂಟಿ ಮಾಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು 7 ಬಾರಿ ರಾಜ್ಯ ಪ್ರವಾಸ ಮಾಡಿದ್ದು, ಅವರ ಈ ಪ್ರವಾಸದ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಕೋಟಿ, ಕೋಟಿ ಲೂಟಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೆಂಪೇಗೌಡ ಪ್ರತಿಮೆ ವೆಚ್ಚ 59 ಕೋಟಿ. ಉದ್ಘಾಟನೆ ಕಾರ್ಯಕ್ರಮಕ್ಕೆ ಸರ್ಕಾರ 30 ಕೋಟಿ ರೂ. ಖರ್ಚು ಮಾಡಿ, ಲೂಟಿ ಹೊಡೆದಿದೆ.
ಸರ್ಕಾರದಿಂದ ಪ್ರಧಾನಮಂತ್ರಿಗಳ ಪ್ರವಾಸದ ಡೀಲ್ ನಡೆಯುತ್ತಿದೆ. ಇದು 40% ಅಲ್ಲ 200% ಡೀಲ್ ನಡೆಯುತ್ತಿದೆ. ಪ್ರದಾನಿಗಳು ಇಲ್ಲಿ ತಕ್ಕಡಿ ಏಳಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದರೆ, ಅವರ ಪ್ರವಾಸದ ಹೆಸರು ಹೇಳಿಕೊಂಡು ಬಿಜೆಪಿ ಸರ್ಕಾರ ಡೀಲ್ ಮಾಡುತ್ತಿದೆ. ಪ್ರಧಾನಮಂತ್ರಿಗಳು ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಬಂದಾಗ ಇವರಿಗೆ ಕೆಂಪೇಗೌಡರ ಮೇಲೆ ಅಭಿಮಾನವಿದೆ ಎಂದು ಭಾವಿಸಿದ್ದೆವು. ಆದರೆ ಇವರು ಕೆಂಪೇಗೌಡರ ಹೆಸರಲ್ಲಿ ಡೀಲ್ ಮಾಡಿದ್ದಾರೆ ಎಂದು ಕಿಡಿಕಾರಿದರು .ಪ್ರಧಾನಮಂತ್ರಿಗಳು ಎಂಬ ಕಾರಣಕ್ಕೆ ಇವರ ಕಮಿಷನ್ ಪರ್ಸೆಂಟೇಜ್ ಹೆಚ್ಚಾಯ್ತಾ? ಚುನಾವಣಾ ಪ್ರಚಾರಕ್ಕೆ ಪರ್ಸೆಂಟೇಜ್ ಹೆಚ್ಚಾಯ್ತಾ.