ಬೆಂಗಳೂರು: ಈ ಕ್ಷಣದಿಂದಲೇ ನೀತಿ ಸಂಹಿತೆ ಕೂಡ ಜಾರಿಯಾಗಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿ ರಾಜೀವ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಡಳಿತ, ವಿರೋಧ ಪಕ್ಷಗಳು ಸೇರಿ ಎಲ್ಲಾ ಪಕ್ಷಗಳು ಇದರಡಿಯಲ್ಲಿ ಬರಲಿವೆ. ಪಕ್ಷಗಳಲ್ಲದೇ ಸರಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸರ್ಕಾರಿ ಸ್ವಾಮ್ಯದ ಸ್ಥಳೀಯ ಸಂಸ್ಥೆಗಳು ಎಲ್ಲವೂ ಕೂಡ ಚುನಾವಣಾ ನೀತಿ ಸಂಹಿತೆಯಡಿಯಲ್ಲಿ ಬರುತ್ತವೆ. ಇದಲ್ಲದೇ ನೀತಿ ಸಂಹಿತೆ ಜಾರಿಯಾದ ನಂತರ ಸರಕಾರ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ.
ಯಾವುದೇ ಹೊಸ ಕಾರ್ಯಕ್ರಮಗಳ ಅನುಷ್ಠಾನ, ಉದ್ಘಾಟನೆ, ಶಂಕುಸ್ಥಾಪನೆಗಳನ್ನು ಮಾಡುವಂತಿಲ್ಲ. ಜೊತೆಗೆ ಹೊಸ ಟೆಂಡರ್ ಗಳನ್ನು ಕರೆಯುವಂತಿಲ್ಲ, ಈಗಾಗಲೇ ಕರೆದ ಟೆಂಡರ್ ಗಳ ಫೈನಲ್ ಮಾಡುವಂತೆಯೂ ಇಲ್ಲ. ಹೊಸ ಯೋಜನೆಗಳಿಗೆ ಹಣ ಘೋಷಣೆ ಮಾಡುವಂತಿಲ್ಲ, ಯಾವುದೇ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸುವಂತಿಲ್ಲ. ಸರಕಾರಿ, ಧಾರ್ಮಿಕ ಸಂಸ್ಥೆಗಳನ್ನು ಸ್ಥಳಗಳನ್ನು ಪ್ರಚಾರಕ್ಕೆ ಬಳಸುವಂತಿಲ್ಲ. ಸಭೆ ಸಮಾರಂಭಗಳನ್ನು ನಡೆಸುವ ಮೊದಲು ಪೊಲೀಸರು ಅನುಮತಿ ಪಡೆಯಬೇಕು. ಬ್ಯಾನರ್, ಫ್ಲೆಕ್ಸ್ ಗಳ ತೆರವು, ಸಭೆ ಸಮಾರಂಭ ಬೈಕ್ ರ್ಯಾಲಿಗೂ ಚುನಾವಣಾ ಆಯೋಗದ ಅನುಮತಿ ಕಡ್ಡಾಯವಾಗಲಿದೆ. ಇನ್ನೂ ಡಿಜೆ ಸೌಂಡ್ಸ್ ಬಳಕೆಗೂ ಮುನ್ನ ಅನುಮತಿ ಕಡ್ಡಾಯ ಮಾಡಲಾಗಿದೆ.
ಚುನಾವಣೆಗೆ ಸ್ಫರ್ಧಿಸುವ ಅಭ್ಯರ್ಥಿಗಳು ಬಳಸುವ ವಾಹನಕ್ಕೆ ಪಾಸ್ ಕಡ್ಡಾಯ ಮಾಡಿದ್ದು, ಅಭ್ಯರ್ಥಿಗಳು ನೇರವಾಗಿ ಚುನಾವಣಾ ಆಯೋಗದ ಪಾಸ್ ತೆಗೆದುಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ವಾಹನ ಬಳಕೆ ಮಾಡುವಲ್ಲಿಯೂ ಅನುಮತಿ ಕಡ್ಡಾಯವಾಗಿದೆ. ಇನ್ನೂ ಬೇರೆ ರಾಜ್ಯದ ನಾಯಕರು ರಾಜ್ಯಕ್ಕೆ ಭೇಟಿ ನೀಡಬೇಕಾದಲ್ಲಿಯೂ ಅನುಮತಿ ಪಡೆಯಬೇಕು. ಇದಲ್ಲದೇ ಮತದಾರರಿಗೆ ಆಮೀಷವೊಡ್ಡುವ ಯಾವುದೇ ವಸ್ತುಗಳನ್ನು ಹಂಚಬಾರದು. ಒಂದು ವೇಳೆ ವಸ್ತುಗಳು ಅಥವಾ ಹಣ ಹಂಚುವ ಚಟುವಟಿಕೆಗಳು ಕಂಡುಬಂದಲ್ಲಿ ನೇರವಾಗಿ ದೂರು ದಾಖಲಾಗುತ್ತದೆ. ಒಂದುವೇಳೆ ನೀತಿ ಸಂಹಿತೆ ಜಾರಿಯಾದಾಗ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ಮಾತ್ರವೇ ಪರಿಹಾರ ಘೋಷಣೆ ಮಾಡುವ ಅವಕಾಶವಿರುತ್ತದೆ. ಇದನ್ನ ಹೊರತಾಗಿ ಯಾವುದೇ ಪರಿಹಾರವಾಗಲಿ, ಯಾವುದೇ ಘೋಷಣೆಗಳನ್ನು ಮಾಡುವಂತಿಲ್ಲ.