ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಭಾರೀ ಚರ್ಚೆ, ಊಹಾಪೋಹ ನಡೆಯುತ್ತಿತ್ತು .ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆ-2023ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ.
ಇಷ್ಟು ದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಭಾರೀ ಚರ್ಚೆ, ಊಹಾಪೋಹ ನಡೆಯುತ್ತಿತ್ತು.
ಇಂದು ಅದಕ್ಕೆ ತೆರೆ ಬಿದ್ದಿದ್ದು, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಅವರು ಈ ಹಿಂದೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದ ಕೋಲಾರ ಮತ್ತು ಅವರು ಈಗ ಶಾಸಕರಾಗಿರುವ ಬಾದಾಮಿ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಣೆ ಮಾಡದೆ ಹಾಗೆಯೇ ಇರಿಸಲಾಗಿದೆ.
ಡಿ.ಕೆ ಶಿವಕುಮಾರ್ ಕನಕಪುರ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ, ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಎಂ. ಬಿ ಪಾಟೀಲ್ ಅವರಿಗೆ ಬಬಲೇಶ್ವರ ಟಿಕೆಟ್ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.