ಬೆಳಗಾವಿ: ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
ನಗರದ ಸಿಪಿಎಡ್ ಮೈದಾಅನದಲ್ಲಿ ನಡೆದ `ಯುವಕ್ರಾಂತಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ನೀಡಲಿದೆ. ಜೊತೆಗೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ 2.5 ಲಕ್ಷ ಉದ್ಯೋಗವನ್ನು ರಾಜ್ಯದ ಯುವಜನರಿಗೆ ಸಿಗುವಂತೆ ಮಾಡಲಿದೆ ಎಂದು ಘೋಷಣೆ ಮಾಡಿದರು.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಕೆಲ ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ ನಡೆಸಲಾಯಿತು. ಅದಕ್ಕೆ ರಾಜ್ಯದಿಂದಲೂ ಜನರು ಅಪಾರ ಬೆಂಬಲ ಕೊಟ್ಟಿದ್ದರು.
ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಯುವಕರು ನಮಗೆ ಕೆಲ ಸಂದೇಶ ಕೊಟ್ಟರು. ಯಾವುದೇ ಪದವೀಧರರಿಗೂ ಕರ್ನಾಟಕ ಸರ್ಕಾರ ಉದ್ಯೋಗ ಕೊಡುತ್ತಿಲ್ಲ, ಯಾವುದೇ ಕೆಲಸ ಆಗಬೇಕು ಅಂದರೂ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂಬ ಸಂದೇಶಗಳನ್ನ ನೀಡಿದರು. ಯುವಕರಿಗೆ ನಿರುದ್ಯೋಗದಿಂದ ಸಮಸ್ಯೆಗಳಾಗುತ್ತಿವೆ. ಸಾಕಷ್ಟು ಮುಜುಗರ ಎದುರಿಸುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ನಮ್ಮ ಸರ್ಕಾರ `ಯುವನಿಧಿ’ಯನ್ನ ಘೋಷಣೆ ಮಾಡಿದೆ ಎಂದು ಹೇಳಿದರು.
ದೇಶದಲ್ಲಿ ಎಲ್ಲ ಕೈಗಾರಿಕೆಗಳನ್ನ ಅದಾನಿ ಕೈಗೆ ಕೊಡುತ್ತಿದ್ದಾರೆ. ರಸ್ತೆ ಏರ್‌ಪೋರ್ಟ್‌ಗಳನ್ನ ಅವರಿಗೇ ಬಿಟ್ಟುಕೊಡಲಾಗುತ್ತಿದೆ. ಬಿಜೆಪಿ ಸರ್ಕಾರದಿಂದ ತಮ್ಮ ಗೆಳೆಯರಿಗೆ ಮಾತ್ರ ಲಾಭವಾಗುತ್ತಿದೆ. ಇದರಿಂದಲೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದೆಲ್ಲವನ್ನೂ ಕಾಂಗ್ರೆಸ್ ಯುವಕರಿಗೆ ತಿಳಿಸುವ ಕೆಲಸ ಮಾಡಿದೆ ಎಂದು ತಿಳಿಸಿದರು.