This is the title of the web page
This is the title of the web page

1.50 ಕೋಟಿ ದಾಟಿದ ಯುಪಿಐ ವಹಿವಾಟು; ತಿಂಗಳಲ್ಲಿ ಎಲ್ಲಾ ಬಸ್ಸುಗಳಲ್ಲಿ ಲಭ್ಯ*

1.50 ಕೋಟಿ ದಾಟಿದ ಯುಪಿಐ ವಹಿವಾಟು; ತಿಂಗಳಲ್ಲಿ ಎಲ್ಲಾ ಬಸ್ಸುಗಳಲ್ಲಿ ಲಭ್ಯ*

 

ಹುಬ್ಬಳ್ಳಿ: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಹಿವಾಟುಗಳ ಮೊತ್ತ ರೂ.1.50 ಕೋಟಿ ದಾಟಿದ್ದು, ತಿಂಗಳಲ್ಲಿ ಸಂಸ್ಥೆಯ ಎಲ್ಲಾ ಬಸ್ಸುಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಯುಪಿಐ ಪಾವತಿ ವ್ಯವಸ್ಥೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಸಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಈ ನೂತನ‌ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿದೆ. ಪ್ರಯಾಣಿಕರು ಫೋನ್ ಪೇ,ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಪದೆ ಪದೇ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಸಂಘರ್ಷಕ್ಕೆ ಕಾರಣವಾಗುವ ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.

ಪ್ರಸ್ತುತ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ 452 ಬಸ್ಸುಗಳಿಗೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೆ 71,396 ವಹಿವಾಟುಗಳು ನಡೆದಿದ್ದು ರೂ. 1,50,26,815 ಮೊತ್ತ ಪಾವತಿಯಾಗಿರುತ್ತದೆ.

ಬಹಳಷ್ಟು ಅನುಕೂಲತೆಗಳಿರುವುದರಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ಬೇಡಿಕೆಯಂತೆ ಯುಪಿಐ ಪಾವತಿ ವ್ಯವಸ್ಥೆಯನ್ನು ಇತರೆ ಬಸ್ಸುಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಸಂಬಂಧಿತ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, ಜನೆವರಿ ತಿಂಗಳ ಅಂತ್ಯದೊಳಗೆ ಸಂಸ್ಥೆಯ ಎಲ್ಲಾ 4581 ಬಸ್ ಗಳಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ. ಇದರ ಜೊತೆಗೆ ಬಸ್ಸುಗಳಲ್ಲಿ ಈಗಿರುವ ನಗದು ಪಾವತಿ ವ್ಯವಸ್ಥೆಯೂ ಮುಂದುವರೆಯುತ್ತದೆ ಎಂದು ಭರತ್ ಮಾಹಿತಿ ನೀಡಿದ್ದಾರೆ.