ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇರ ನೇಮಕಾತಿ, ಮುಂಬಡ್ತಿಗೆ ಶೇ.70:30 ಅನುಪಾತ ನಿಗದಿಯು ಕಾರ್ಯನಿರ್ವಹಣೆ ಆಡಳಿತಕ್ಕೆ ಪೂರಕಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ

ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇರ ನೇಮಕಾತಿ, ಮುಂಬಡ್ತಿಗೆ ಶೇ.70:30 ಅನುಪಾತ ನಿಗದಿಯು ಕಾರ್ಯನಿರ್ವಹಣೆ ಆಡಳಿತಕ್ಕೆ ಪೂರಕಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ
ಬೆಳಗಾವಿ ಸುವರ್ಣಸೌಧ ಡಿ.11 : ಪೊಲೀಸ್  ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪಿಎಸ್ಐ ಹುದ್ದೆಗೆ ಅನುಭವವುಳ್ಳ ಮತ್ತು ಯುವ ಅಧಿಕಾರಿಗಳನ್ನು ಪರಿಗಣಿಸಿ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಶೇಕಡ 70:30 ಅನುಪಾತವನ್ನು ನಿಗದಿಪಡಿಸಲಾಗಿದ್ದು, ಈ ಅನುಪಾತ ನಿಗದಿಯು ಇಲಾಖೆಯ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕೆ ಪೂರಕವಾಗಿರುತ್ತದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಹೇಳಿದರು.

ಪರಿಷತ್ತಿನಲ್ಲಿ ಡಿ.11ರಂದು ಪ್ರಶ್ನೋತರ ವೇಳೆ ಸದಸ್ಯರಾದ ಡಿ.ಟಿ.ಶ್ರೀನಿವಾಸ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪಿ.ಎಸ್.ಐ (ಸಿವಿಲ್) ಹುದ್ದೆಯು ಪ್ರಮುಖ ಹುದ್ದೆಯಾಗಿದ್ದು, ಸಂಬಂಧಪಟ್ಟ ಠಾಣಾ ವ್ಯಾಪ್ತಿಯ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆ, ಅಪರಾಧ ಪ್ರಕರಣಗಳ ಪತ್ತೆ ಮತ್ತು ತನಿಖೆ, ಸಂಚಾರ ನಿರ್ವಹಣೆಯು ಇವರ ಮುಖ್ಯ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯಗಳನ್ನು ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದ ಹಾಗೂ ತಾಂತ್ರಿಕ ನೈಪುಣ್ಯತೆಯುಳ್ಳ ಯುವ ಅಧಿಕಾರಿಗಳ ಅವಶ್ಯಕತೆ ಇರುತ್ತದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಅಪರಾಧ. ಪ್ರಕರಣಗಳು ಹೆಚ್ಚಿನ ತಾಂತ್ರಿಕತೆಯಿಂದ ಕೂಡಿದ್ದು, ಇಂತಹ ಪ್ರಕರಣಗಳ ಪತ್ತೆಗೆ ಹೆಚ್ಚಿನ ತಾಂತ್ರಿಕ ವಿದ್ಯಾರ್ಹತೆಯುಳ್ಳ ಯುವಕರ ಅವಶ್ಯಕತೆ ಇರುತ್ತದೆ.

ಸಾಮಾನ್ಯವಾಗಿ ಪೊಲೀಸ್ ಕಾನ್ಸ್-ಟೇಬಲ್ ವೃಂದದ ಸಿಬ್ಬಂದಿಗಳು ಕ್ರಮವಾಗಿ ಹೆಡ್ ಕಾನ್ಸ್ ಟೇಬಲ್ ಮತ್ತು ಎಎಸ್ಐ ಹುದ್ದೆಗಳಿಗೆ 02 ಮುಂಬಡ್ತಿಯನ್ನು ಹೊಂದಿ ನಂತರ ಪಿ.ಎಸ್.ಐ(ಸಿವಿಲ್) ಹುದ್ದೆಗೆ ಅರ್ಹರಾಗುತ್ತಾರೆ. ಇವರ ಶಿಕ್ಷಣವು ಮೂಲ ಹುದ್ದೆಯ ಕನಿಷ್ಕ ಮಟ್ಟದ್ದಾಗಿರುವುದರಿಂದ ಪ್ರಸ್ತುತ ವರದಿಯಾಗುತ್ತಿರುವ ಹೆಚ್ಚಿನ ತಾಂತ್ರಿಕತೆ ಅಪರಾಧ ಪ್ರಕರಣ ಭೇದಿಸುವುದು ಕಷ್ಟಸಾಧ್ಯವಾಗಿರುತ್ತದೆ.

ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆ ಹಾಗೂ ಇತರ ಇಲಾಖೆಗಳ ಕಾರ್ಯನಿರ್ವಹಣೆಗೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಪೆÇಲೀಸ್ ಇಲಾಖೆಯ ಪಿಎಸ್ಐ ಹುದ್ದೆಯನ್ನು ಇತರ ಇಲಾಖೆಯ ಹುದ್ದೆಗಳೊಂದಿಗೆ ಹೋಲಿಸುವುದು ಸೂಕ್ತವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪಿಎಸ್ಐ ಹುದ್ದೆಗೆ ಅನುಭವವುಳ್ಳ ಮತ್ತು ಯುವ ಅಧಿಕಾರಿಗಳನ್ನು ಪರಿಗಣಿಸಿ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಶೇಕಡ 70:30 ಅನುಪಾತವನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾಲಮಿತಿಯೊಳಗೆ ಮುಂಬಡ್ತಿ: ಬೆಂಗಳೂರು ನಗರ ಪೊಲೀಸ್   ಆಯುಕ್ತಾಲಯದ ಘಟಕದಲ್ಲಿ (ಸಂಚಾರಿ ವಿಭಾಗಗಳನ್ನು ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಎಎಸ್ಐ ರವರುಗಳಿಗೆ ಪ್ರಸ್ತುತ ಸುಮಾರು 29 ವರ್ಷಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಎಎಸ್ ಐ ಹುದ್ದೆಯಲ್ಲಿ 5 ವರ್ಷ 10 ತಿಂಗಳು ಸೇವೆಯನ್ನು ಪೂರೈಸಿರುವ ಕಾಲಮಿತಿಯೊಳಗೆ ಮುಂಬಡ್ತಿ ನೀಡಲಾಗಿದೆ ಎಂದು ಇದೆ ವೇಳೆ ಗೃಹ ಸಚಿವರು ಮಾಹಿತಿ ನೀಡಿದರು.